ಪ್ರಾಣಿಗಳ ದಾಹ ತೀರಿಸುತ್ತಿರುವ ರೈತ

ಪ್ರಾಣಿಗಳ ದಾಹ ತೀರಿಸುತ್ತಿರುವ ರೈತ

ಗದಗ: ಬರಗಾಲ ಆವರಿಸಿದ್ದರಿಂದ ರೈತರು ಜಾನುವಾರುಗಳಿಗೆ ನೀರು – ಮೇವು ಹಾಕಲಾಗದೆ ಕೇಳಿದಷ್ಟು ಬೆಲೆಗೆ ಮಾರಿಕೊಳ್ಳುತ್ತಿರುವ ಈ ಸ್ಥಿತಿಯಲ್ಲಿ ತಾಲೂಕಿನ ಕೋಟುಮಚಗಿ ರೈತರೊಬ್ಬರು ತಮ್ಮ ಜಮೀನಿನ ಕೆರೆಯನ್ನು ಜಾನುವಾರುಗಳಿಗೆ ನೀರುಣಿಸಲು ಬಿಟ್ಟುಕೊಟ್ಟಿದ್ದಾರೆ.

ರಾಜ್ಯದಲ್ಲಿ ಬರಗಾಲ ಆವರಿಸಿ ಅನ್ನದಾತನ ಪಾಡು ಹೇಳತೀರದಾಗಿದೆ. ಜಾನುವಾರುಗಳಿಗೆ ಹೇಗಾದರೂ ಮೇವಿನ ವ್ಯವಸ್ಥೆ ಮಾಡಿದರೂ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದೆ. ಇದರಿಂದಾಗಿ ಅನೇಕ ರೈತರು ತಮ್ಮ ಎತ್ತು, ಎಮ್ಮೆ, ಕುರಿ, ಕೋಣಗಳನ್ನು ಸಂತೆಗೆ ಸಾಗಿಸಿದ್ದಾರೆ. ಕೇಳಿದಷ್ಟು ಬೆಲೆಗೆ ಒಲ್ಲದ ಮನಸ್ಸಿನಿಂದಲೇ ಮತ್ತೂಬ್ಬ ರೈತರಿಗೋ ಕಟುಕರ ಕೈಗೋ ಒಪ್ಪಿಸುತ್ತಿದ್ದಾರೆ. ಇದನ್ನು ಕಂಡು ಮನ ಕರಗಿರುವ ಗದಗ ನಿವಾಸಿ ಶರಣಪ್ಪ ಚವಡಿ ಅವರು ಕೋಟುಮಚಗಿ ಗ್ರಾಮದ ತಮ್ಮ ಜಮಿನಿನಲ್ಲಿರುವ ಐದು ಗುಂಟೆ ವಿಸ್ತಾರವಾದ ಕೆರೆಯನ್ನು ಜಾನುವಾರುಗಳ ಕುಡಿಯುವ ನೀರಿಗಾಗಿ ಬಿಟ್ಟುಕೊಟ್ಟಿದ್ದಾರೆ. ಕೋಟುಮಚಗಿ ಗ್ರಾಮದ ಸುತ್ತ 14ಕ್ಕೂ ಹೆಚ್ಚು ಕೆರೆಗಳಿದ್ದರೂ ಬರದಿಂದಾಗಿ ಬತ್ತಿಹೋಗಿವೆ. ಕೋಟುಮಚಗಿ, ನಾರಾಯಣಪುರ ಮುಂತಾದ ಗ್ರಾಮಗಳ ರೈತರು ತಮ್ಮ ಜಾನುವಾರುಗಳ ಕುಡಿಯುವ ನೀರಿಗಾಗಿ ಶರಣಪ್ಪ ಅವರ ಕೆರೆಯನ್ನೇ ಅವಲಂಬಿಸಿದ್ದಾರೆ.

ಪರ ಊರಿನಿಂದ ಬರುವ ಕುರಿಗಾಹಿಗಳೂ ಶರಣಪ್ಪ ಅವರ ಜಮೀನಿಗೆ ಸಮೀಪದಲ್ಲೇ ಬಿಡಾರ ಹೂಡುತ್ತಿದ್ದಾರೆ. ಸುತ್ತಲಿನ ಪ್ರದೇಶದಲ್ಲಿ ಮೇಯುವ ಸಾವಿರಾರು ಕುರಿಗಳಿಗೂ ಈ ಕೆರೆಯೇ ಜೀವಾಳ. ಹೀಗಾಗಿ ಪ್ರತಿನಿತ್ಯ ಬೆಳಗ್ಗೆ, ಮಧ್ಯಾಹ್ನ ಹಾಗೂ ಸಂಜೆ ವೇಳೆ ನೂರಾರು ಎತ್ತು, ಎಮ್ಮೆ ಹಾಗೂ ಸಾವಿರಾರು ಕುರಿ, ಮೇಕೆಗಳು ಶರಣ ಅವರ ಕೆರೆಯ ನೀರನ್ನು ಕುಡಿಯುತ್ತಿವೆ.

ಕೊಳವೆ ಬಾವಿಯಿಂದ ಕೆರೆಗೆ ನೀರು
ಶರಣಪ್ಪ ಅವರ ಜಮೀನುಗಳಲ್ಲಿ ಈ ಹಿಂದೆ 2 ಕೊಳವೆ ಬಾವಿಗಳು ವಿಫಲವಾಗಿದ್ದು, 3ನೇ ಪ್ರಯತ್ನದಲ್ಲಿ ಬೋರ್‌ವೆಲ್‌ನಲ್ಲಿ ನೀರು ಕಂಡಿದೆ. ಶರಣಪ್ಪ ಅವರ ಕೊಳವೆ ಬಾವಿನಲ್ಲಿ ಭರಪೂರ ನೀರು. ಪ್ರತಿನಿತ್ಯ 6 ಗಂಟೆ ಕೊಳವೆ ಬಾವಿಯಿಂದ ಕೆರೆಗೆ ನೀರು ತುಂಬಿಸುತ್ತಿದ್ದಾರೆ. ಕೆರೆಯಿಂದ ಜಮೀನು ಪಕ್ಕದ ಹಳ್ಳಕ್ಕೂ ನೀರು ಹರಿಸುವ ಮೂಲಕ ವನ್ಯಜೀವಿ, ಪಕ್ಷಿಗಳಿಗೂ ಅನುಕೂಲ ಕಲ್ಪಿಸಿದ್ದಾರೆ. ಬೆಳಗಿನ ಜಾವ ಜಿಂಕೆ, ಚಿಗರೆ, ನರಿ ನೀರು ಕುಡಿಯಲು ಬರುತ್ತಿವೆ. ಹತ್ತಾರು ಕೋತಿಗಳ ಹಿಂಡು ಹಳ್ಳದ ಪಕ್ಕದಲ್ಲಿಯೇ ಬೀಡು ಬಿಟ್ಟಿದೆ. ಹಕ್ಕಿಗಳ ಕಲರವವೂ ಜೋರಾಗಿದೆ. ಶರಣಪ್ಪ ಅವರ ಈ ಸೇವೆಗೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.


admin

MHR Foundation of India