ಸಂಸ್ಕೃತಿ ಸಂಪನ್ನನ ಸಹಜಕೃಷಿ ದಿಬ್ಬೇಮನೆ ತೋಟ

ಸಂಸ್ಕೃತಿ ಸಂಪನ್ನನ ಸಹಜಕೃಷಿ ದಿಬ್ಬೇಮನೆ ತೋಟ

ಸಂಗೀತ,ನಾಟಕ, ಹಾರ್ಮೋನಿಯಂ,ತಬಲ, ಕನ್ನಡಪರ ಕೆಲಸ ಇದರ ನಡುವೆ ಕೃಷಿಯನ್ನೂ ಅಷ್ಟೇ ಪ್ರೀತಿ ಮತ್ತು ಕಾಳಜಿಯಿಂದ ಮಾಡುತ್ತಿರುವ ಪ್ರೊ.ಬಿ.ಸೋಮಶೇಖರಪ್ಪ ಸಪ್ತಸ್ವರ ಬಳಗದ ಮೂಲಕ ಮೈಸೂರಿನಲ್ಲಿ ಹಿಂದೂಸ್ತಾನಿ ಸಂಗೀತ ಪರಂಪರೆಯನ್ನು ಜೀವಂತವಾಗಿಟ್ಟಿದ್ದಾರೆ. ಸದಾ ಲವಲವಿಕೆಯಿಂದ ಇರಬಯಸುವ ಮೇಷ್ಟ್ರು ಕೃಷಿಯಲಿ ಖುಷಿಯಲಿ ನಿವೃತ್ತ ಜೀವನದ ಸಾರ್ಥಕತೆ ಕಂಡುಕೊಂಡಿದ್ದಾರೆ.
ಹತ್ತು ವರ್ಷದಲ್ಲಿ ಅವರು ಕಟ್ಟಿದ ಐದು ಎಕರೆ “ದಿಬ್ಬೇಮನೆ” ತೋಟ ಈಗ ಅನ್ನದ ಬಟ್ಟಲು, ಪ್ರಶಾಂತ ವನ. ನಾಡಿನ ಪ್ರಸಿದ್ಧ ಸಂಗೀತಗಾರರಿಗೆ ಅತಿಥ್ಯ ನೀಡುವ ತೊಟ್ಟಿಲು. ಇಲ್ಲಿನ ಮರಗಿಡ ಬಳ್ಳಿಗಳು ಸಂಗೀತ ದಿಗ್ಗಜರ ಗಾಯನ ಮೋಡಿಗೆ ತಲೆದೂಗಿವೆ. ಈ ನೆಲ ಸುಭಾಷ್ ಪಾಳೇಕರ್, ಪುಟ್ಟಣ್ಣಯ್ಯ, ಕನ್ನಡ ಚಳುವಳಿಗಾರರು, ರಂಗಭೂಮಿ ಕಲಾವಿದರ ಪಾದ ಸ್ಪರ್ಶದಿಂದ ಪುಳಕಗೊಂಡಿದೆ.

ಮೈಸೂರು : ಇವರು ಕಾಲೇಜಿನಲ್ಲಿ ನನ್ನಂತ ಅಸಂಖ್ಯಾತ ವಿದ್ಯಾರ್ಥಿಗಳಿಗೆ ಕನ್ನಡ ಸಾಹಿತ್ಯ ಕಲಿಸಿದ ಗುರು. ಸಂಗೀತಾಸಕ್ತರಿಗೆ ಹಿಂದೂಸ್ತಾನಿ ಶಾಸ್ತ್ರೀಯಸಂಗೀತ ಹೇಳಿಕೊಟ್ಟ ವಿದ್ವಾನ್. ನಾಟಕಕಾರ, ಕನ್ನಡ ಶಾಲೆಯ ಕಾವಲುಗಾರ. ಸಂಘಟನಾ ಚತುರ. ಮೈಸೂರು ವಿಶ್ವ ವಿದ್ಯಾನಿಲಯ ಸೆನೆಟ್ ಮಾಜಿ ಸದಸ್ಯ. ಉಪನ್ಯಾಸಕ ವೃತ್ತಿಯಿಂದ ನಿವೃತ್ತರಾದ ನಂತರ ಸುಭಾಷ್ ಪಾಳೇಕರ್ ಅವರ ಕೃಷಿ ಪದ್ಧತಿಗೆ ಮಾರುಹೋಗಿ ಸಹಜ ಕೃಷಿಕರಾದ “ದಿಬ್ಬೇಮನೆ ತೋಟ”ದ ಮಾಲೀಕ ಸಂಸ್ಕೃತಿ ಸಂಪನ್ನ. ಅವರೇ ನಮ್ಮ ಈ ವಾರದ ಬಂಗಾರದ ಮನುಷ್ಯ ಪ್ರೊ.ಬಿ.ಸೋಮಶೇಖರಪ್ಪ.

ಹತ್ತು ವರ್ಷದಲ್ಲಿ ಅವರು ಕಟ್ಟಿದ ಐದು ಎಕರೆ ತೋಟ ಈಗ ಸಮೃದ್ಧ ಅನ್ನದ ಬಟ್ಟಲು, ಪ್ರಶಾಂತ ವನ. ನಾಡಿನ ಪ್ರಸಿದ್ಧ ಸಂಗೀತಗಾರರಿಗೆ ಅತಿಥ್ಯ ನೀಡುವ ತೊಟ್ಟಿಲು. ಇಲ್ಲಿನ ಮರಗಿಡ ಬಳ್ಳಿಗಳು ಸಂಗೀತ ದಿಗ್ಗಜರಾದ ನಿರೋಡಿ, ಸೋಮನಾಥ ಮರಡೂರು, ವಿನಾಯಕ ತೊರವಿ, ಗಣಪತಿ ಭಟ್, ವೆಂಕಟೇಶ್ ಕುಮಾರ್, ಪರಮೇಶ್ವರ ಹೆಗ್ಗಡೆ, ಪಯಾಜ್ ಖಾನ್ ಅವರ ಗಾಯನ ಕೇಳಿ ತಲೆದೂಗಿವೆ.
ಮಗ ವಿವೇಕ್ ತಬಲ ನುಡಿಸುತ್ತಾರೆ, ಸೊಸೆ ಮಾಲಾ ಭರತನಾಟ್ಯ ಕಲಾವಿದೆ. ಮಗಳೂ ರೂಪ ಕೂಡ ಉತ್ತಮ ಗಾಯಕಿ. ಮನೆ ಮಂದಿಯೆಲ್ಲ ಸಂಗೀತ ಸಂಸ್ಕೃತಿ ಪ್ರೀಯರು. ಮೊಮ್ಮಕ್ಕಳಿಗೂ ಈ ಪರಂಪರೆ ರಕ್ತಗತವಾಗಿ ಬಂದಿದೆ. ಎಲ್ಲರೂ ಅಮೇರಿಕಾದಲ್ಲಿ ನೆಲಸಿದ್ದು ವರುಷಕ್ಕೊಮ್ಮೆ ಹಸಿರು ತೋಟಕ್ಕೆ ಬಂದು ಹೋಗುತ್ತಾರೆ.

ಈ ನೆಲ ಸುಭಾಷ್ ಪಾಳೇಕರ್, ಪುಟ್ಟಣ್ಣಯ್ಯ, ಕನ್ನಡ ಚಳುವಳಿಗಾರರು, ರಂಗಭೂಮಿ ಕಲಾವಿದರ ಪಾದ ಸ್ಪರ್ಶದಿಂದ ಪುಳಕಗೊಂಡಿದೆ. ಇದೆಲ್ಲವನ್ನು ಮುಗ್ಧ ಮಗುವಿನಂತೆ ತೋಟದ ನಡುವೆ ಕುಳಿತು ಹೇಳುತ್ತಾ ಹೋದರು ನನ್ನ ಪ್ರೀತಿಯ ಮೇಷ್ಟ್ರು ಸೋಮಶೇಖರಪ್ಪ.

ತೋಟ ಸುತ್ತಾಟದ ನಂತರ ಅವರು ಹಾರ್ಮೋನಿಯಂ ಬಾರಿಸುತ್ತಾ ರಾಗ ಹಾಕಿದರೆ ಅವರ ಪತ್ನಿ ದಾಕ್ಷಯಿಣಿ ಅಮ್ಮ ಸುಶ್ರಾವ್ಯವಾಗಿ ಹಾಡಿದರು. ನಾವು ತಲೆದೂಗಿದೆವು. ಅವರ ಹಾಡಿನ ಮೋಡಿಯಲ್ಲಿ ತೇಲಿಹೋದೆವು. ತುಂಬು ಜೀವನ ಪ್ರೀತಿಯ ಸಂಸ್ಕೃತಿ ಸಂಪನ್ನನೊಬ್ಬ ಮನಸ್ಸು ಮಾಡಿದರೆ ಬದುಕಿಗೆ ಎಂತ ಚೆಲುವು ತಂದುಕೊಳ್ಳಬಲ್ಲ ಎನ್ನುವುದಕ್ಕೆ ಸಾಕ್ಷಿಯಾಗಿ ದಂಪತಿ ನಮ್ಮೆದರು ಕುಳಿತಿದ್ದರು. ಅವರ ಹಸಿರು ಪ್ರೀತಿಗೆ ನಾವು ಮರುಳಾದೆವು.

ಚಿಕ್ಕಮಗಳೂರು ಜಿಲ್ಲೆಯ ಸಖರಾಯಪಟ್ಟಣ ಸಮೀಪದ ಕುನ್ನಾಳು ಎಂಬ ಕುಗ್ರಾಮವೊಂದರಿಂದ ಬಂದ ಸೋಮಶೇಖರಪ್ಪ ಮೂವತ್ತೈದು ವರ್ಷಗಳ ಕಾಲ ಜೆಎಸ್ಎಸ್ ಕಾಲೇಜಿನಲ್ಲಿ ಉಪನ್ಯಾಸಕರಾಗಿ, ಪ್ರಾಂಶುಪಾಲರಾಗಿ ನಿವೃತ್ತರಾದ ನಂತರ ಕೃಷಿಯಲಿ ಖುಷಿಕಾಣುತ್ತಾ ಆನಂದವಾಗಿದ್ದಾರೆ.

ಮೈಸೂರಿನಿಂದ ವರುಣಾ ಕೆರೆ ದಾಟಿ ವರಕೋಡು ಮಾರ್ಗದಲ್ಲಿ ಪಿಲ್ಲಹಳ್ಳಿ ಬಳಿ ಎಡಕ್ಕೆ ತಿರುಗಿದರೆ ಐದು ಎಕರೆಯಲ್ಲಿ ಅರಳಿನಿಂತ ಪ್ರಶಾಂತವಾದ ಹಸಿರುವನ “ದಿಬ್ಬೆಮನೆ ತೋಟ” ಸಿಗುತ್ತದೆ. ಉಳುಮೆ ಇಲ್ಲದ, ಕಳೆ ತೆಗೆಯದ, ವಿಷಮುಕ್ತವಾದ, ಜೀವಂತ ಹೊದಿಕೆಯ ಅಡಿಕೆ, ತೆಂಗು, ಬಾಳೆ, ಸೀಬೆ, ಸಪೋಟ, ಬತ್ತ, ರಾಗಿ ಹೀಗೆ ಹತ್ತಾರು ಬೆಳೆಗಳ ಸಮಗ್ರ ಪದ್ಧತಿಯ ತೋಟ ಕಣ್ಮನ ಸೆಳೆಯುತ್ತದೆ.

ಅಪ್ಪಯ್ಯನಿಗೆ ಇಷ್ಟ ಇರಲಿಲ್ಲ : “ನಮ್ಮದು ಮೂಲತಹ ಕೃಷಿ ಕುಟುಂಬವೇ. ನಾನು ಬಾಲುದಲ್ಲಿ ದನ ಮೇಯಿಸುತ್ತಾ, ಸಗಣಿ ಬಾಚುತ್ತಾ ಮಣ್ಣಿನೊಂದಿಗೆ ಆಡಿಕೊಂಡು ಬೆಳೆದವನೆ. ನೌಕರಿಗೆ ಸೇರಿದ ಮೇಲೆ ನಿವೃತ್ತಿ ಅಂಚಿನಲ್ಲಿ ಬೇಸಾಯ ಮಾಡುವ ಮನಸ್ಸಾಯಿತು. ಅಪ್ಪನಿಗೆ ಹೇಳಿದೆ. ಅವರಿಗೆ ಇಷ್ಟವಾಗಲಿಲ್ಲ. ಜಮೀನು ಖರೀದಿ ಮಾಡಲು ಅವರನ್ನು ಕರೆದುಕೊಂಡು ಹೋದರೆ, ಬೇಕೆಂತಲೇ ಅವರು ವ್ಯಾಪಾರವನ್ನು ಮುರಿಯುತ್ತಿದ್ದರು. ಮಗ ಕೃಷಿ ಮಾಡಲು ಹೋಗಿ ಮನೆಮಂದಿಯನ್ನೆಲ್ಲ ಉಪವಾಸ ಕೆಡವಿಬಿಟ್ಟಾನು ಎಂಬ ಭಯ ಅವರಿಗೆ. ಅವರಿಗೆ ಗೊತ್ತಿಲ್ಲದಂತೆ ನಿವೃತ್ತಿಯಾಗುವ ಮೂರು ವರ್ಷದ ಮುಂಚೆ 2001 ರಲ್ಲಿ ಎಲ್ಐಸಿ ಮತ್ತು ಉಳಿಸಿದ ಹಣ ಕೂಡಿಸಿ ಎಂಟು ಲಕ್ಷ ರೂಪಾಯಿ ಕೊಟ್ಟು ಈ ಭೂಮಿ ಖರೀದಿಸಿದೆ.2003 ರಲ್ಲಿ ನಿವೃತ್ತನಾದ ನಂತರ ಸಂಪೂರ್ಣ ಸಹಜ ಕೃಷಿಕನಾದೆ ಎಂದರು ಸೋಮಶೇಖರ್.

“ಇದ್ದಕ್ಕಿದಂತೆ ತೋಟ ನೋಡಲು ಅವರನ್ನು ಕಾರಿನಲ್ಲಿ ಕರೆದುಕೊಂಡು ಹೋದೆ. ಎಲ್ಲಿಗೆ ಎಂದರು. ಎಲ್ಲೂ ಇಲ್ಲ ಬನ್ನಿ ಎಂದೆ. ತೋಟದ ಗೇಟ್ನಲ್ಲಿ ” ದಿಬ್ಬೇಮನೆ ತೋಟ” ಎಂಬ ಫಲಕನೋಡಿ ಅವರಿಗೆ ಆಶ್ಚರ್ಯವಾಯಿತು. ಆಗ ಅವರು ಹೇಳಿದ್ದು ಏನೂ ಗೊತ್ತೆ. ಇನ್ನೂ ಹತ್ತು ವರ್ಷ ಇದರಿಂದ ಆದಾಯ ನಿರೀಕ್ಷೆ ಮಾಡಬೇಡ. ಹೆಂಡತಿಮಕ್ಕಳನ್ನು ಉಪವಾಸ ಕೆಡವಬೇಡ ಅಂತ. ಅದೂ ನಿಜವೇ” ಎಂದು ನಕ್ಕರು.

ಬನುಮಯ್ಯ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದ ಸಿದ್ದಲಿಂಗಯ್ಯ ಎಚ್.ಡಿ.ಕೋಟೆ ಬಳಿ ಜಮೀನು ಖರೀದಿಸಿ ಇರೋ ಹಣವನ್ನೆಲ್ಲ ಸುರಿದರು ನಯಾ ಪೈಸೆ ಬರಲಿಲ್ಲ. ಮೊನ್ನೆ ತೀರಿಕೊಂಡರು. ಅದಕ್ಕೆ ವ್ಯವಸಾಯವನ್ನು ಬಲು ಎಚ್ಚರಿಕೆಯಿಂದ ಮಾಡಬೇಕು.ನೀರು ಸಾಕಷ್ಟು ಸಿಗುವಂತಿರಬೇಕು. ಮಣ್ಣು ಫಲವತ್ತಾಗಿರಬೇಕು. ಆಗ ಕೃಷಿಯಲ್ಲಿ ಯಾವ ಪ್ರಯೋಗವನ್ನಾದರೂ ಧೈರ್ಯವಾಗಿ ಮಾಡಿ ಗೆಲ್ಲಬಹುದು.
ಮೊದಲ ಮೂರು ವರ್ಷ ಕಳೆ ತೆಗುಯುವುದು,ರಾಸಾಯನಿಕ ಹಾಕಿ ಬೆಳೆಯುವುದು ಮಾಡಿದೆ.ಆದಾಯ ಬರಲಿಲ್ಲ. ನಂತರ 2005 ರಲ್ಲಿ ಸುಭಾಷ್ ಪಾಳೇಕರ್ ಅವರ ಶೂನ್ಯ ಬಂಡವಾಳದ ನೈಸರ್ಗಿಕ ಕೃಷಿ ಶಿಬಿರದಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿತ್ತು. ಅಲ್ಲಿಂದ ನೈಸರ್ಗಿಕ ಕೃಷಿಕನಾಗಿ ಬದಲಾದೆ. ಕಬ್ಬು, ಜೋಳ, ರಾಗಿ, ತರಕಾರಿ ಸೊಪ್ಪು ಎಲ್ಲವನ್ನೂ ಬೆಳೆದು ಗೆದ್ದೆವು.

ಆರಂಭದ ಹತ್ತು ವರ್ಷ ನನಗೂ ತೋಟದಿಂದ ಏನೂ ಆದಾಯ ಬರಲಿಲ್ಲ. ಧಾಂಧೂಂ ಖಚರ್ು ಮಾಡದೆ ಎಚ್ಚರಿಕೆಯಿಂದ ಬಂಡವಾಳತೊಡಗಿಸಿ ಕೆರೆಯ ನೀರನು ಕೆರೆಗೆ ಚೆಲ್ಲಿ ನಿಧಾನವಾಗಿ ವರ ಪಡೆದಿದ್ದಾಯಿತು. ಈಗ ತೋಟದ ವಾರ್ಷಿಕ ಆದಾಯ ಆರು ಲಕ್ಷ ರೂಪಾಯಿ ಇದೆ. ಖಚರ್ು ಕಡಿಮೆ. ತೋಟ ನೋಡಿಕೊಳ್ಳಲು ನಮ್ಮ ಸಂಬಂಧಿಕರ ಸಂಸಾರವೊಂದಿದೆ ಅವರಿಗೆ ವಾಷರ್ಿಕ ಒಂದು ಲಕ್ಷ ರೂಪಾಯಿ ಕೊಡುತ್ತೇನೆ. ಸಹಜ ಕೃಷಿಯಲ್ಲಿ ನನಗೂ ಐದು ಲಕ್ಷ ಸಿಗುತ್ತಿದೆ ಎಂದು ಲೆಕ್ಕ ನೀಡುತ್ತಾರೆ ಸಾಹಿತ್ಯದ ಮೇಷ್ಟ್ರು.

ಸಮಗ್ರ ತೋಟ : ತೋಟ ಖರೀದಿಸಿದಾಗ 140 ತೆಂಗು ಮತ್ತು ಪುಟ್ಟ ಗುಡಿಸಲು ಮಾತ್ರ ಇತ್ತು. ಈಗ ಇಲ್ಲಿ ಹತ್ತು ವರ್ಷದ 1500 ಅಡಿಕೆಮರ ಇದೆ. ಬಾಳೆ ಇದೆ. ಒಂದು ಎಕರೆಯನ್ನು ಬತ್ತ, ರಾಗಿ, ಜೋಳ ಬೆಳೆಯಲು ಬಿಟ್ಟುಕೊಂಡಿದ್ದಾರೆ.

“ಈ ತೋಟಕ್ಕೆ ಒಂದು ಚಮಚ ರಾಸಾಯನಿಕ ಗೊಬ್ಬರವನ್ನು ಹಾಕಿಲ್ಲ. ಒಂದು ಹನಿ ಕ್ರಿಮಿನಾಶಕವನ್ನು ಸೋಂಕಿಸಿಲ್ಲ. ನಮ್ಮದು ಸಂಪೂರ್ಣ ಶೂನ್ಯ ಬಂಡವಾಳದ ನೈಸಗರ್ಿಕ ತೋಟ. ಹನ್ನೆರಡು ವರ್ಷದಿಂದ ತೋಟಕ್ಕೆ ಉಳುಮೆ ಮಾಡಿಲ್ಲ.ಸುಭಾಷ್ ಪಾಳೇಕರ್ ಪದ್ಧತಿಯಲ್ಲಿ ಬೀಜಾಮೃತ, ಜೀವಾಮೃತ, ಬ್ರಹ್ಮಾಸ್ತ್ರ, ಹೊದಿಕೆ, ಮತ್ತು ಮರಗಿಡ ಸಂಯೋಜನೆ ಮಾಡಿ ಕಟ್ಟಿದ ತೋಟ. ಇಲ್ಲಿ ನೀರಿಗೆ ತೊಂದರೆ ಇಲ್ಲ. ಆದರೂ ನಾವು ಧಾಂಧೂಂ ಅಂತ ಹೆಚ್ಚು ನೀರನ್ನು ಬಳಸುವುದಿಲ್ಲ. ತಿಂಗಳಿಗೆ ಒಮ್ಮೆ ಗಿಡಗಳಿಗೆ ನೀರು ಕೊಡುತ್ತೇವೆ. ಮರದಿಂದ ಬಿದ್ದ ಸೋಗು, ಕಳೆ ಎಲ್ಲವನ್ನು ಹೊದಿಕೆಯಾಗಿ ಮಾಡಿ ಭೂಮಿಯ ತೇವಾಂಶ ಉಳಿಸಿಕೊಂಡಿದ್ದೇವೆ. ಇದೆಲ್ಲ ಚೆನ್ನಾಗಿ ಕಳಿತು ಅದೇ ಗೊಬ್ಬರವಾಗುತ್ತದೆ ನೋಡಿ” ಅಂತ ಮಣ್ಣನ್ನು ಕೈಯಲ್ಲಿ ಬಗೆದು ತೋರಿಸಿದರು ಮೇಷ್ಟ್ರು. ಸ್ಪಾಂಜಿನಂತೆ ಮೃದುವಾಗಿದ್ದ ಮಣ್ಣು ಹಿತವಾದ ಕಂಪು ಬೀರಿತು.

ಪರವಾಲಂಭಿಯಾದ ರೈತ : ಹಸಿರು ಕ್ರಾಂತಿ ರೈತರನ್ನು ಪರವಾಲಂಭಿಯಾಗಿ ಮಾಡಿತು. ಬೀಜ, ಗೊಬ್ಬರ, ಕೃಷಿ ಉಪಕರಣ ಎಲ್ಲದ್ದಕ್ಕೂ ಕಾಖರ್ಾನೆಗಳನ್ನೇ ಅವಲಂಭಿಸುವಂತಾಯಿತು. ಪಾರಂಪರಿಕ ಕೃಷಿ ಮರೆತೆಹೋಯಿತು. ಎತ್ತು, ನೇಗಿಲು,ಕುಂಟೆ, ಕೂರಿಗೆಗಳು ಮಾಯವಾಗಿ ಟ್ರ್ಯಾಕ್ಟರ್, ಟಿಲ್ಲರ್ ಬಂದವು. ಗಟ್ಟಿಯಾದ ದೇಸಿ ಬೀಜಗಳು ಮಾಯವಾಗಿ ಸಂಸ್ಕರಿಸಿದ ಬಿತ್ತನೆ ಕಾಳುಗಳು ಬಂದವು. ಅಲ್ಲಿಂದ ರೈತನ ಬಾಳು ಗೋಳಾಯಿತು.

ಜಪಾನಿನ ಕೃಷಿ ವಿಜ್ಞಾನಿ ಕುರೋಸೇವಾ ಹೈಬ್ರೀಡ್ ಬೀಜಗಳನ್ನು ಕಂಡು ಹಿಡಿದರೆ. ಅವನ ಶಿಷ್ಯ ಮಸನೊಬ ಫುಕೋವಕಾ ಗುರುವಿನ ವಿರುದ್ಧ ದಿಕ್ಕಿನಲ್ಲಿ ನಡೆದು ಜಗತ್ತಿಗೆ ಬೆಳಕಾದ. ನಮ್ಮ ಕೃಷಿಗೂ ಹತ್ತು ಸಾವಿರ ವಷಘ್ಳ ಇತಿಹಾಸವಿದೆ. ಇದನ್ನು ಅರಿತು ಬೇಸಾಯ ಮಾಡದಿದ್ದರೆ ಮುಂದಿನ ಜನಾಂಗ ಸಂಕಷ್ಟದ ಸುಳಿಯಲ್ಲಿ ಸಿಲುಕಿ, ನಾನಾ ರೋಗಗಳ ಗೂಡಾಗಿ ಜೀವಿಸಬೇಕಾಗುತ್ತದೆ ಎಂದು ಸೋಮಶೇಖರ್ ಆತಂಕ ವ್ಯಕ್ತಪಡಿಸುತ್ತಾರೆ.

ಸಾವಯವಕ್ಕೆ ಬೇಡಿಕೆ : ನಾವು ಬೆಳೆದ ಉತ್ಪನ್ನಗಳನ್ನು ಮೈಸೂರಿನ ಭೂಮಿ, ನಿಸರ್ಗ ಮಾರಾಟ ಕೇಂದ್ರಗಳಿಗೆ ಕೊಡುತ್ತೇವೆ. ಮನೆಗೆ ಬೇಕಾದ ಸೊಪ್ಪು ತರಕಾರಿ ಹಣ್ಣುಗಳನ್ನು ವಿಷಮುಕ್ತವಾಗಿ ಬೆಳೆದುಕೊಳ್ಳುತ್ತೇವೆ. ಎಲ್ಲಕ್ಕಿಂತ ಹೆಚ್ಚಾಗಿ ತೋಟಕ್ಕೆ ಬಂದರೆ ಸಿಗುವ ಮನಶಾಂತಿಗೆ ಬೆಲೆ ಕಟ್ಟಲಾಗದು.
ವಿದೇಶಗಳಲ್ಲೂ ತಾಜಾ ಸಾವಯವ ತರಕಾರಿಗಳಿಗೆ ಈಗ ಬೇಡಿಕೆ ಇದೆ.ಗ್ರಾಹಕರು ಅದಕ್ಕೆ ಹೆಚ್ಚು ಬೆಲೆಕೊಟ್ಟು ಖರೀದಿಸುತ್ತಾರೆ. ನಮ್ಮಲ್ಲಿ ಶೃಂಗಾರ ಸಾಧನಗಳಿಗೆ,ಐಶಾರಾಮಿ ವಸ್ತುಗಳಿಗೆ ಕೇಳಿದಷ್ಟು ಹಣ ಕೊಟ್ಟು ಕೊಂಡುಕೊಳ್ಳುವ ಜನ ತರಕಾರಿ ಬೆಲೆ ತುಸು ಹೆಚ್ಚಾದರೆ ಬೊಬ್ಬೆ ಹೊಡೆಯುತ್ತಾರೆ.
ಜಗತ್ತಿನ ಯಾವ ಮೂಲೆಗೆ ಹೋದರು ರೈತನ ಸ್ಥಿತಿ ಇದೆ. ಕೈಗಾರಿಕೋದ್ಯಮಿಗೆ ಇರುವಷ್ಟು ಸ್ವಾತಂತ್ರ್ಯ ರೈತನಿಗೆ ಇಲ್ಲ. ಅದಕ್ಕೆ ರೈತ ಉತ್ಪಾದನಾ ವೆಚ್ಚವನ್ನು ತಗ್ಗಿಸಿಕೊಂಡು, ವೆಚ್ಚ ಕಡಿಮೆಮಾಡಿ ಗುಣಮಟ್ಟದ ಉತ್ಪನ್ನ ತೆಗೆಯಬೇಕು. ಇದು ನೈಸಗರ್ಿಕ ಕೃಷಿಯಿಂದ ಮಾತ್ರ ಸಾಧ್ಯ. ಹೆಚ್ಚು ಹಣ ಬೇಡದ, ಕೆಲಸ ಬೇಡದ, ಗೊಬ್ಬರ ಕೇಳದ ಸಹಜ ಕೃಷಿಯ ಬಗ್ಗೆ ಮಾಧ್ಯಮಗಳು ಹೆಚ್ಚು ಹೆಚ್ಚು ಅರಿವು ಮೂಡಿಸಬೇಕು ಎನ್ನುತ್ತಾರೆ ಸೋಮಶೇಖರಪ್ಪ.

ಮಂಗ ಓಡಿಸಲು ಹುಲಿ : ತೋಟದಲ್ಲಿ ಮಂಗಗಳ ಕಾಟ. ಅದಕ್ಕೆ ಹುಲಿಯ ಬೊಂಬೆಯನ್ನು ತಂದು ಇಟ್ಟಿದ್ದೇವೆ. ಪ್ರತಿ ದಿನ ಜಾಗ ಬದಲಿಸಿ ಹಿಡುವುದರಿಂದ ಮಂಗಗಳ ಕಾಟ ಕಡಿಮೆಯಾಗಿದೆ. ರಾತ್ರಿ ಬೊಂಬೆ ಹುಲಿಯನ್ನು ಎತ್ತಿ ಮನೆಯಲ್ಲಿಡುತ್ತೇವೆ. ಮತ್ತೆ ಬೆಳಗಾಗುತ್ತಿದ್ದಂತೆ ಈ ಹುಲಿ ನಮ್ಮ ಮಂಗಗಳ ಕಾವಲುಗಾರ ಎಂದು ಹುಲಿಯ ಬೆನ್ನು ಸವರಿದರು ಪ್ರೋಫೆಸರ್.

ಸಂಗೀತ,ನಾಟಕ, ಹಾರ್ಮೋನಿಯಂ,ತಬಲ, ಕನ್ನಡಪರ ಕೆಲಸ ಇದರ ನಡುವೆ ಕೃಷಿಯನ್ನೂ ಅಷ್ಟೇ ಪ್ರೀತಿ ಮತ್ತು ಕಾಳಜಿಯಿಂದ ಮಾಡುತ್ತಿರುವ ಪ್ರೊ.ಬಿ.ಸೋಮಶೇಖರಪ್ಪ ಸಪ್ತಸ್ವರ ಬಳಗದ ಮೂಲಕ ಮೈಸೂರಿನಲ್ಲಿ ಹಿಂದೂಸ್ತಾನಿ ಸಂಗೀತ ಪರಂಪರೆಯನ್ನು ಜೀವಂತವಾಗಿಟ್ಟಿದ್ದಾರೆ. ವಚನ ಚಳುವಳಿಯಿಂದ ಪ್ರಭಾವಿತರಾಗಿ ಮಗನಿಗೆ ವಚನ ಮಾಂಗಲ್ಯ ಮಾಡಿ ಆದರ್ಶ ಮೆರೆದಿದ್ದರು. ಇಂದಿಗೂ ಅವರ ಮಕ್ಕಳು ಹೇಳುತಿರುತ್ತಾರಂತೆ ” ನಮಗೆ ನಮ್ಮ ಅಪ್ಪ ಒಳ್ಳೆಯ ಸಂಗೀತ ಕಲಿಸಿದರು. ಸಂಸ್ಕೃತಿ ಹೇಳಿಕೊಟ್ಟರು, ಶಿಕ್ಷಣ ಕೊಡಿಸಿದರು. ಸಂಪಾದನೆಗೆ ದುಡಿಮೆ ಇದೆ. ಆನಂದಕ್ಕೆ ಸಂಗೀತ ಇದೆ. ಬೇಸರವಾದರೆ ಹಸಿರಿದೆ” ಎಂದು. ಇದಕ್ಕಿಂತ ಒಬ್ಬ ಅಪ್ಪನಿಗೆ ಮತ್ತೇನು ಪ್ರಶಸ್ತಿ, ಗೌರವ ಬೇಕು. ಜವಾಬ್ದಾರಿಯುತ ಅಪ್ಪ, ಸಾಹಿತ್ಯ, ಸಂಗೀತದ ಗುರು, ಸದಾ ಲವಲವಿಕೆಯಿಂದ ಇರಬಯಸುವ, ಕೃಷಿಯಲಿ ಖುಷಿಯಲಿ ನಿವೃತ್ತ ಜೀವನದ ಸಾರ್ಥಕತೆ ಕಂಡುಕೊಳ್ಳುತ್ತಿರುವ ಮೇಷ್ಟ್ರರಿಗೆ ಶಿಷ್ಯಕೋಟಿಯ ಪರವಾಗಿ ಅನಂತ ಪ್ರಣಾಮಗಳು.


admin

MHR Foundation of India